ಪ್ರಾಣಿ ಜಾನಪದ

	ಜಾನಪದದಲ್ಲಿ ಪ್ರಾಣಿಗಳ ಪಾತ್ರವೇನು ಎಂದು ತಿಳಿಸುವ ಶಾಸ್ತ್ರ.

	ಮಾನವರ ಸಹವಾಸದಷ್ಟೇ ಸಹಜವಾಗಿ ಪ್ರಾಣಿಗಳ ಸಹವಾಸದಲ್ಲೂ ಬೆಳೆದ ಪ್ರಾಚೀನ ಮಾನವ ಸಂದರ್ಭಕ್ಕೆ ತಕ್ಕಂತೆ ಅವುಗಳ ಬಗೆಗೆ ಚಿತ್ರವಿಚಿತ್ರವಾದ ನಂಬಿಕೆಗಳನ್ನು ಸೃಷ್ಟಿಸಿಕೊಂಡ. ಬಹುಪಾಲು ನಂಬಿಕೆಗಳು ಮೂಢನಂಬಿಕೆಗಳೆನಿಸಿರುವ ಇಂದಿನ ದಿನಗಳಲ್ಲೂ ಅವುಗಳ ಉಗಮದ ಕಾರಣಗಳನ್ನು ಹುಡುಕುವಾಗ ಅವು ಕಾರ್ಯಕಾರಣ ಸಂಬಂಧ ಉಳ್ಳವಾಗಿ ತೀರ ಸಹಜವಾಗಿ ಕಾಣುತ್ತವೆ. ಇತಿಹಾಸಪೂರ್ವದ ಪ್ರಾಚೀನ ಮಾನವ ಗುಹೆಗಳಲ್ಲೋ ಮರದ ಪೊಟರೆಗಳಲ್ಲೋ ವಾಸಮಾಡುತ್ತಿದ್ದ ಕಾಲದಲ್ಲಿ ಸಹಜವಾಗಿಯೇ ಅವನು ಬಗೆಬಗೆಯ ಪ್ರಾಣಿಗಳೊಂದಿಗೆ ವ್ಯವಹರಿಸಬೇಕಾಗಿತ್ತು. ಗುಹೆಯೊಳಗಿನ ಕತ್ತಲೆಗಳನ್ನು ಆತ ರಾಕ್ಷಸನೆಂದು ಬಗೆದ ಮಿಂಚನ್ನು ಕಂಡು ಹೌಹಾರಿದ, ಗುಡುಗನ್ನು ಕೇಳಿ ಪೊಟರೆಯೊಳಗೇ ಮುದುರಿದ. ಪ್ರಾಣಿಗಳ ಬದುಕನ್ನು, ಬದುಕಿನ ರೀತಿಯನ್ನು ಅವುಗಳ ಸ್ವಭಾವವನ್ನು ಅರಿಯುವ ಮೊದಲೇ ಅವುಗಳ ಬಗೆಗಿನ ನಂಬಿಕೆಗಳು ಹುಟ್ಟಿಕೊಳ್ಳಲು ಪ್ರಾರಂಭವಾಗಿರಬೇಕು. ಅವುಗಳ ಬಗೆಗೆ ಅರಿಯುತ್ತ ಅರಿಯುತ್ತ ನಡೆದಂತೆ ನಂಬಿಕೆಗಳ ಗುಣಸ್ವಭಾವಗಳೂ ಬದಲಾಯಿಸಿಕೊಳ್ಳುತ್ತಲೋ ಹೊಸ ಹೊಸ ನಂಬಿಕೆಗಳು ಹುಟ್ಟಿಕೊಳ್ಳುತ್ತಲೋ ಬಂದಿರಬೇಕು.

	ಪ್ರಾಣಿಗಳ ಬಗೆಗೆ ಯೋಚಿಸಲೂ ಗಮನಿಸಲೂ ತೊಡಗಿದ ಮಾನವ ಅವುಗಳ ಗುಣ ಸ್ವಭಾವಗಳನ್ನು ಅರಿಯಲು ತಡವಾಗಲಿಲ್ಲ. ಆದ್ದರಿಂದ ಇಂದು ನಮಗೆ ಲಭ್ಯವಿರುವ ಜನಪದ ಸಾಹಿತ್ಯದಲ್ಲಿ ಪ್ರಾಣಿಸಾಹಿತ್ಯವನ್ನೇ ಒಂದು ಪ್ರತ್ಯೇಕ ಬಗೆಯಾಗಿ ಕಾಣಲು ಸಾಧ್ಯವಾಯಿತು. ಜನಪದ ಕಥೆಗಳಲ್ಲಿ ಒಂದು ವರ್ಗವಾದ ಪ್ರಾಣಿಕಥೆಗಳು ಈ ಮೂಲಕ ಹುಟ್ಟಿಕೊಂಡವು. ಪ್ರಾಣಿಕಥೆಗಳೇ ಜನಪದ ಕಥೆಗಳಲ್ಲಿ ಅತ್ಯಂತ ಪ್ರಾಚೀನ ಪ್ರಕಾರವೆಂಬುದಾಗಿ ಹಲವರು ಅಭಿಪ್ರಾಯ ಪಡುತ್ತಾರೆ. ಮನುಷ್ಯ ತನ್ನ ಶೈಶವಾವಸ್ಥೆಯಿಂದ ತಾಳಿದ ಕುತೂಹಲ, ವಹಿಸಿದ ಆಸಕ್ತಿಗಳೇ ಇಂಥ ಕಥೆಗಳಿಗೆ ಕಾರಣವಾಗಿರಬೇಕೆಂದು ತೋರುತ್ತದೆ. ಆದಿವಾಸಿಯ ಜೀವನದ ಮೇಲೆ ಪ್ರಭಾವ ಬೀರಿದ ಅತ್ಯಂತ ದೊಡ್ಡ ಶಕ್ತಿಗಳಲ್ಲಿ ಪ್ರಕೃತಿ ಪ್ರಧಾನವಾದುದರಿಂದ ಸಹಜವಾಗಿಯೇ ಆತ ಅದರ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರಬೇಕು. ಇಂಥ ಪ್ರತಿಕ್ರಿಯೆಯ ಪ್ರತೀಕಗಳಾಗಿ ಪ್ರಾಣಿಕಥೆಗಳು ಸೃಷ್ಟಿಯಾಗಿರಬೇಕೆಂದು ಊಹಿಸಬಹುದಾಗಿದೆ. ಪ್ರಾಣಿಕಥೆಗಳು ಮೊದಮೊದಲು ಪ್ರಾಕೃತಿಕ ವಿಷಯಗಳ ವಿವರಣೆಗಳಾಗಿದ್ದು, ಆ ಮೇಲೆ ನೀತಿಕಥೆಗಳಾಗಿ ಮಾರ್ಪಾಡಾಗಿರಬೇಕು. ಪ್ರಾಚೀನ ಬುಡಕಟ್ಟುಗಳ ನಂಬಿಕೆಗಳ ಪ್ರಕಾರವಾಗಿ ಪ್ರಾಣಿಜಾನಪದದ ಉಗಮದ ಬಗ್ಗೆ ಪ್ರಸ್ತಾಪ ಮಾಡುತ್ತ ನಿಸ್ಸಂದೇಹವಾಗಿ ಅದು ಇತಿಹಾಸಪೂರ್ವದ ಕಾಲಗಳಷ್ಟು ಹಿಂದಕ್ಕೆ ಹೋಗುತ್ತದೆ ಎಂಬುದಾಗಿ ಅಲೆಗ್ಸಾಂಡರ್ ಹ್ಯಾಗಟ್ಟಿ ಕ್ರಾಪೆ ಅಭಿಪ್ರಾಯ ಪಡುತ್ತಾನೆ. ತನ್ನ ಹಿರಿಯನೊಬ್ಬನ ಸಮಾಧಿಯಿಂದ ಹಾವೊಂದು ಹೊರಬರುತ್ತಿರುವುದನ್ನು ಕಂಡವನೊಬ್ಬ. ಆ ಹಾವು ತನ್ನ ಹಿರಿಯನೇ ಎಂಬ ನಂಬಿ ಅದನ್ನು ಗೌರವಿಸುತ್ತಾನೆ, ಪೂಜಿಸುತ್ತಾನೆ. ಪರಿಣಾಮವಾಗಿ ಹಾವು ತಮ್ಮ ಪೂರ್ವಜರ ಮರುಹುಟ್ಟು ಎಂಬ ನಂಬಿಕೆ ಪ್ರಚಲಿತವಾಗುತ್ತದೆ. ಈ ಉದಾಹರಣೆಯನ್ನು ಹೇಳುತ್ತ ಎಷ್ಟೋ ಸಲ ಪ್ರಾಣಿಸಂಬಂಧವಾದ ನಂಬಿಕೆಗಳು ಅಸಂಬದ್ಧ ತರ್ಕದ ಮೇಲೆಯೂ ಸೃಷ್ಟಿಯಾಗಬಹುದೆಂಬ ನಿಲುವಿಗೆ ಬರುತ್ತಾನೆ. ನಾಗರಹಾವು ಸತ್ತಾಗ ಮನುಷ್ಯರಿಗೆ ಮಾಡುವಂತೆಯೇ ಅಪರಕರ್ಮಗಳನ್ನು ಮಾಡುವ ಕ್ರಮ ದಕ್ಷಿಣ ಕನ್ನಡ ಜಿಲ್ಲೆ ಮುಂತಾದ ಕಡೆಗಳಲ್ಲಿ ಈಗಲೂ ಆಚರಣೆಯಲ್ಲಿದೆ.

	ಸಮಾಜದಿಂದ ಬಹಿಷ್ಕøತವಾದ ಮತ್ತು ಬಾಂಧವರ ತಿರಸ್ಕಾರಕ್ಕೆ ಗುರಿಯಾದ ಹೆಂಗಸರು ಮತ್ತು ಮಕ್ಕಳು ಪ್ರಾಣಿಪಕ್ಷಿಗಳಿಂದ ರಕ್ಷೆ ಪಡೆದಿರುವ ವಿಷಯ ಪುರಾಣೇತಿಹಾಸಗಳ ವಸ್ತುವಾಗಿದೆ. ದಶಾವತಾರದಲ್ಲಿ ಅನೇಕ ಪ್ರಾಣಿ ಅವತಾರಗಳು ಬರುತ್ತವೆ. ಅರಣ್ಯಕ್ಕೆ ಕರೆತಂದು ಬಿಟ್ಟ ಲಕ್ಷ್ಮಣ ಹೊರಟುಹೋದ ಮೇಲೆ ಮೂರ್ಛೆಗೊಂಡ ಸೀತೆಯನ್ನು ಪಶುಪಕ್ಷಿಗಳು ಉಪಚರಿಸಿದ ಉದಾಹರಣೆಯಿದೆ. ನಳದಮಯಂತಿಯರ ನಡುವೆ ಪ್ರೇಮ ಅಂಕುರಿಸಲು ಹಂಸವೊಂದು ಸಂವಹನಾಸ್ತ್ರವಾಗಿ ಬಳಕೆಯಾಗಿದೆ. ಒಂದೊಂದು ಪ್ರಾಣಿಯೂ ಒಂದೊಂದು ಜನಾಂಗಕ್ಕೆ ಪೂಜ್ಯವಾಗಲು ಕಾರಣಗಳಿರುತ್ತವೆ. ಪುರಾಣಗಳಲ್ಲಾಗಲಿ ವೇದೋಪನಿಷತ್ತುಗಳಲ್ಲಾಗಲಿ ಪ್ರಸ್ತಾಪವಾಗಿರುವ ಪ್ರಾಣಿ ಸಂಬಂಧವಾದ ನಂಬಿಕೆಗಳಿಗೆ ಇತಿಹಾಸಪೂರ್ವದಿಂದ ತನ್ನದೇ ಹಾದಿಯೊಂದರಲ್ಲಿ ನಡೆದು ಬಂದಿರುವ ಜನಪದ ಬದುಕೇ ಆಕರವಾಗಿರಬಹುದೆಂದು ಹೇಳಬಹುದು.

	ಪ್ರಾಣಿಗಳ ಬಗೆಗಿನ ನಂಬಿಕೆಗಳು ಯಾವುದೇ ಒಂದು ದೇಶಕ್ಕೆ ಯಾವುದೇ ಒಂದು ಜನಾಂಗಕ್ಕೆ ಸೀಮಿತವಾಗಿಲ್ಲ. ಮಾನವಕುಲ ಎಂಬುದೊಂದು ಇರುವೆಡೆಯಲ್ಲೆಲ್ಲ ಅದು ಬಳಕೆಯಲ್ಲಿರುವಂಥದು. ಅನೇಕ ಕಡೆಗಳಲ್ಲಿ ಭಯದಿಂದ ಪ್ರಾಣಿಗಳ ಹೆಸರನ್ನು ಕೂಡ ಹೇಳದೆ ಸೂಚ್ಯವಾಗಿ ಹೇಳುವುದುಂಟು. ಭಯದ ಕಲ್ಪನೆ ಬಹಳಮಟ್ಟಿಗೆ ಸಾರ್ವತ್ರಿಕ ಅಂಶವಾಗಿರುವುದರಿಂದ ಇತರ ಪ್ರಾಣಿಗಳಿಗಿಂತ ಹೆಚ್ಚಾಗಿ ಹಾವನ್ನು ಕುರಿತ ನಂಬಿಕೆಗಳು ದೊರೆಯುತ್ತವೆ. ನಮ್ಮಲ್ಲಿ ಕತ್ತಲೆಯ ಹೊತ್ತಿನಲ್ಲಿ ಹಾವುಚೇಳುಗಳ ಬಗ್ಗೆ ಎಚ್ಚರಿಕೆ ಹೇಳುವಾಗ ಸತ್ತೆಗಿತ್ತೆ ಇದ್ದಾವು ಎಂದು ಹೇಳುವುದು ರೂಢಿಯಲ್ಲಿರುವಂತೆ ಮಧ್ಯಯೂರೋಪು ಮತ್ತು ಸ್ಕಾಂಡಿನೇವಿಯಾ ದೇಶಗಳಲ್ಲಿ ತೋಳವನ್ನು ಮೌನಿ ಎಂದೋ ಕಾಡೋಡಿ ಎಂದೋ ಕರೆಯುವುದು ರೂಢಿ. ತನ್ನ ಉಪಯೋಗಕ್ಕೆ ಬರುವಂಥ ವಸ್ತುವಿನ ಬಗ್ಗೆಗೌರವ ಭಾವನೆಯೋ ಪೂಜ್ಯಭಾವನೆಯೋ ಉಪಯೋಗಕ್ಕೆ ಬಾರದ ಹಾಗೂ ಅಪಾಯಕಾರಿಯಾದ ವಸ್ತುವಿನ ಬಗ್ಗೆ ದ್ವೇಷಭಾವನೆಯೋ ಹುಟ್ಟುವುದು ಮಾನವನ ಬದುಕಿನಲ್ಲಿ ಎಂದಿನಿಂದಲೋ ನಡೆದುಕೊಂಡು ಬಂದಿರುವ ಸಹಜ ರೀತಿಯಾಗಿದೆ.

	ಪ್ರಾಣಿಗಳಿಗೆ ಸಂಬಂಧಿಸಿದ ನಂಬಿಕೆಗಳು ಒಂದೊಂದು ಪ್ರದೇಶದಲ್ಲಿಯೂ ಅಪಾರವಾಗಿವೆ. ಭೌಗೋಳಿಕ ಸಂಗತಿಗಳು, ಆರ್ಥಿಕ ಕಾರಣಗಳು ಹಾಗೂ ಅಲ್ಲಲ್ಲಿಯ ಜನರ ಮನೋಧರ್ಮ ಸಂಸ್ಕಾರಗಳು ನಂಬಿಕೆಗಳ ಉಗಮವನ್ನು ನಿರ್ಧರಿಸುವುದರಿಂದ, ಅವು ದೇಶದಿಂದ ದೇಶಕ್ಕೆ ವ್ಯತ್ಯಾಸವಾಗಬಹುದು. ಒಂದು ಕಡೆ ಬೆಕ್ಕು ಅಡ್ಡವಾಗುವುದು ಅನಿಷ್ಟವೆಂದು ತಿಳಿದರೆ, ಮತ್ತೊಂದು ಕಡೆ ಅದೇ ಇಷ್ಟವಾಗಿ ಕಾಣಬಹುದು. ಯಾವುದಾದರೂ ಪ್ರಾಣಿ ಅನ್ಯದೇಶದಿಂದ ಬಂದದ್ದಾದರೆ ಅದಕ್ಕೆ ಸಂಬಂಧಿಸಿದ ನಂಬಿಕೆಗಳೂ ಅದನ್ನು ಹಿಂಬಾಲಿಸಬಹುದು. ಯೂರೋಪಿನಲ್ಲಿ ನವಿಲುಗರಿ ದುರದೃಷ್ಟದ ಸಂಕೇತ. ಅದು ಆ ಭಾಗಕ್ಕೆ ಪರಿಚಯವಾದದ್ದು ಹೋಮರನ ಅನಂತರ. ಆದ್ದರಿಂದ ಆ ನಂಬಿಕೆ ಭಾರತದಿಂದ ಅಥವಾ ಇತರ ಪೌರಸ್ತ್ಯ ರಾಷ್ಟ್ರಗಳಿಂದ ಆಮದಾಗಿರಬೇಕೆಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಕ್ಯಾಲಿಪೋರ್ನಿಯಾದ ಹಚ್‍ನಮ್ ಇಂಡಿಯನ್ನರ ಪುರಾಣವೊಂದರಲ್ಲಿ ಉಕ್ತವಾಗಿರುವಂತೆ ಸ್ಥಿರತೆಯಿಲ್ಲದೆ ತೂಗಾಡುತ್ತಿದ್ದ ಭೂಮಿಯನ್ನು ಅತ್ತಿತ್ತ ಅಲುಗಾಡದಂತೆ ಹಿಡಿದು ನಿಲ್ಲಿಸಲು ಸೃಷ್ಟಿಕರ್ತ ಕೆಲವು ಬಗೆಯ ಪ್ರಾಣಿಗಳನ್ನು ಭೂಮಿಗೆ ಕಳುಹಿಸಿದನಂತೆ. ಏನುಮಾಡಿದರೂ ಭೂಮಿ ತೂಗಾಡುವುದನ್ನು ತಪ್ಪಿಸಲಾಗಲಿಲ್ಲವಂತೆ. ಆಗ ಸೃಷ್ಟಿಕರ್ತ ಆ ಪ್ರಾಣಿಗಳೆಲ್ಲ ಮಲಗಿ ಬಿಡುವಂತೆ ಹೇಳಿದನಂತೆ. ಅವು ಮಲಗಿದ ಮೇಲೆ ಭೂಮಿ ಸ್ಥಿರವಾಗಿ ನಿಂತಿತಂತೆ. ಆ ಪ್ರಾಣಿಗಳು ಆಗಾಗ ಅಲುಗಾಡುವುದೇ ಭೂಕಂಪನವಾಗಲು ಕಾರಣ ಎಂಬ ನಂಬಿಕೆ ಅವರಲ್ಲಿದೆ.
	ಪ್ರಾಯದ ಹುಡುಗಿಯೊಬ್ಬಳು ದೆವ್ವದೊಡನೆ ಲೈಂಗಿಕ ಸಂಪರ್ಕ ಹೊಂದಿದುದೇ ಹಲ್ಲಿಗಳ ಹುಟ್ಟುವಿಕೆಗೆ ಕಾರಣ ಎಂಬ ಆಶಯವುಳ್ಳ ಬೆಲ್ಜಿಯಂ ಕತೆಯೊಂದಿದೆ. ಫಾರ್ಮೋಸನ್ನರ ಪ್ರಕಾರ ಏಡಿ ಮತ್ತು ಮೀನುಗಳ ಹುಟ್ಟುವಿಕೆಗೆ ಸೋದರ ಸೋದರಿಯರ ನಡುವೆ ಮದುವೆಯಾದುದೇ ಕಾರಣ, ಕೆಲವು ಕಡೆ ಅನೈತಿಕ ಸಂಭೋಗವೇ ರಾಕ್ಷಸರ ಹುಟ್ಟಿಗೆ ಕಾರಣ ಎಂದು ನಂಬಲಾಗುತ್ತದೆ. ಅವಳಿ ಮರಿಗಳಾದರೆ ಅದಕ್ಕೆ ಬೆರಕೆಯೇ ಕಾರಣ ಎಂಬುದು ನಿರ್ದಿಷ್ಟ ನಿರ್ಣಯವಾಗಿ ಪರಿಗಣಿತವಾಗಿರುವುದುಂಟು.

	ಈಗ ಕರ್ನಾಟಕದಲ್ಲಿ ಪ್ರಚಲಿತವಿರುವ ಕೆಲವು ನಂಬಿಕೆಗಳನ್ನು ನೋಡಬಹುದು. ಕನಸಿನಲ್ಲಿ ಆನೆ ಕಂಡರೆ ಆಯುಷ್ಯ ಹೆಚ್ಚುತ್ತದೆಯಂತೆ. ವಾರ ಇಲ್ಲದ ದಿನ ಮಾತ್ರ ಹಾವುರಾಣಿಯನ್ನು ಕೊಲ್ಲಬಹುದಂತೆ. ಓತಿ (ಹೆಂಟೆಗೊದ್ದ)ಯನ್ನು ಎಲ್ಲಿ ಕಂಡರೂ ಕೊಲ್ಲಬೇಕಂತೆ. ಹೊಡೆತ ತಿಂದೂ ತಪ್ಪಿಸಿಕೊಂಡ ಓತಿ ತಲೆ ಕುಣಿಸುವುದನ್ನು ಕಂಡೂ ಬಿಡುತ್ತೀಯಾ ?' ಎಂದು ಅದು ಅಪಹಾಸ್ಯ ಮಾಡಿ ಅಶ್ಲೀಲವಾಗಿ ಬೈಯುತ್ತದೆ ಎಂದು ಅರ್ಥೈಸಲಾಗಿದೆ.

	ಗೋವುಗಳು ಮೊದಲು ಮಾತಾಡುತ್ತಿದ್ದುವಂತೆ. ಅತ್ತೆಸೊಸೆಯರ ಜಗಳದ ಸಂದರ್ಭವೊಂದರಲ್ಲಿ ಅವು ಮಾತಾಡುವುದನ್ನು ಬಿಟ್ಟುವಂತೆ. ಆ ಕಥೆಯ ಪ್ರಕಾರ ಸತ್ಯ ಹೇಳಿ ಸೊಸೆಯಿಂದ ಮೂತಿಗೆ ತಿವಿಸಿಕೊಂಡಿದ್ದೇ ಅವುಗಳ ನಿರ್ಧಾರಕ್ಕೆ ಕಾರಣವೆಂಬುದು ವೇದ್ಯವಾಗುತ್ತದೆ. ಕೋಪಗೊಂಡ ಸೊಸೆ ಎತ್ತಿನ ಮೂತಿಗೆ ತಿವಿದು. ನಿನ್ನ ಸೊಲ್ಲು ಸ್ವಾಮಾರ ಅಡಗ ಎಂದಳಂತೆ. ಆದ್ದರಿಂದ ಅವು ಮಾತು ನಿಲ್ಲಿಸಿದ್ದು ಸೋಮವಾರ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಈಗಲೂ ಸೋಮವಾರ ಎತ್ತನ್ನು ಉಳುಮೆಗೆ ಹೂಡುವುದಿಲ್ಲ.

	ಜಾನಪದದಲ್ಲಿ ನರಿಗೆ ಒಂದು ವಿಶಿಷ್ಟ ಸ್ಥಾನವಿದೆ. ಸಂದರ್ಭಕ್ಕೆ ತಕ್ಕ ಪರಿಹಾರಗಳನ್ನು ಹುಡುಕುವುದರಲ್ಲಿ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಲ್ಲಿ, ಸೂಕ್ತ ನ್ಯಾಯ ನೀಡಿ ಅನ್ಯಾಯಗಾರರನ್ನು ತರಾಟೆಗೆ ತೆಗೆದುಕೊಳ್ಳುವಲ್ಲಿ ಚುರುಕುತನದಲ್ಲಿ ಆದು ತನ್ನದೇ ಆದ ವಿಶಿಷ್ಟ ಸ್ಥಾನದಲ್ಲಿ ಮೆರೆಯುತ್ತಿದೆ. ಎಲ್ಲಕ್ಕೂ ಹೆಚ್ಚಾಗಿ ಮೊಸಳೆ ತನ್ನ ಕಾಲನ್ನೇ ಕಚ್ಚಿ ಹಿಡಿದಿದ್ದಾಗಲೂ ಧೈರ್ಯಗೆಡದ ತಾಳ್ಮೆಗೆಡದೆ ಕ್ಷಣಾರ್ಧದಲ್ಲಿ ಪಾರಾಗುವ ತನ್ನ ಕ್ಷಿಪ್ರ ಆಲೋಚನೆ ಕ್ಷಿಪ್ರ ಕಾರ್ಯಾಚರಣೆಗಳಿಂದ ಅದು ಜನಮನವನ್ನು ರಂಜಿಸಿದೆ. ಅಂದ ಮಾತ್ರಕ್ಕೆ ನರಿ ಉದಾತ್ತ ವ್ಯಕ್ತಿತ್ವವನ್ನೇನೂ ಹೊಂದಿಲ್ಲ. ತಾನು ಅಪಾಯದಿಂದ ಪಾರಾಗುವುದಕ್ಕಾಗಿ ಇನ್ನೊಬ್ಬರನ್ನು ಕಷ್ಟಕ್ಕೆ ಸಿಕ್ಕಿಸುವ ಕುಟಿಲಬುದ್ಧಿಯೂ ಅದರಲ್ಲಿದೆ. ಸ್ವಜನರ ಮುಂದೆ ಅವಮಾನವಾಗಬಹುದಾದ ಸಂದರ್ಭಗಳಲ್ಲಿ ಯಾರೂ ಉಸಿರೆತ್ತದಂತೆ ಉಳಿದ ನರಿಗಳಿಂದಲೂ ಅದೇ ತಪ್ಪನ್ನು ಮಾಡಿಸುವಂಥ ಕುತಂತ್ರಬುದ್ಧಿಯೂ ಇಲ್ಲದಿಲ್ಲ. ಹೀಗೆ ನರಿ ಜಾನಪದದಲ್ಲಿ ಸೆಳೆದುಕೊಂಡಿರುವ ಆಸಕ್ತಿ, ಸ್ಥಾನ ಸಿಂಹಪಾಲಿನಷ್ಟು. ಬೆಕ್ಕು ಮತ್ತು ನಾಯಿಗಳು ಜೊತೆಜೊತೆಗೇ ನಂಬಿಕೆಗೂ ಆ ನಂಬಿಕೆಗೆ ಕಾರಣವೆನ್ನಲಾದ ಘಟನೆಗೂ ಗಂಟು ಹಾಕಲ್ಪಟ್ಟಿವೆ. ಬೆಕ್ಕನ್ನು ಕೆಲವು ಹಳ್ಳಿಗಳಲ್ಲಿ ಈಗಲೂ ಕೊತ್ತಿ ಎಂದು ಕರೆಯುವುದುಂಟು. ಕೊತ್ತಿಗೂ ಮನುಷ್ಯನಿಗೂ ವೈರವಂತೆ. ಮನುಷ್ಯ ಒಮ್ಮೆ ಹಗ್ಗದ ಸೇತುವೆಯನ್ನು ದಾಟುವಾಗ ಕೊತ್ತಿ ಹಗ್ಗವನ್ನು ಕಡಿದು ಬೀಳಿಸಿದಂತೆ. ಅವನು ನೀರಿಗೆ ಬೀಳುವ ಮೊದಲೇ ನಾಯಿ ತನ್ನ ಬಾಲವನ್ನು ನೀಡಿ ಅವನನ್ನು ರಕ್ಷಿಸಿತಂತೆ. ಅದಕ್ಕೆ ಕೃತಜ್ಞತೆಯೋ ಎಂಬಂತೆ ಮಾನವ ಸಾಕುತ್ತಾ ಇದ್ದಾನೆ. ಆದರೆ ಕಾಲ ಬದಲಾದಂತೆಲ್ಲ ನಾಯಿಗಿಂತಲೂ ಕೊತ್ತಿಯೇ ಮುದ್ದಾದ ಪ್ರಾಣಿಯೆಂದು ಪರಿಗಣಿತವಾಗುತ್ತಿದೆ. ಕೊತ್ತಿಯ ಬಗ್ಗೆ ಜಾನಪದ ಜೀವನದಲ್ಲಿ ಅನುಕಂಪೆಯೂ ಅದು ಶ್ರೇಷ್ಠ ಪ್ರಾಣಿ ಎಂಬ ನಂಬಿಕೆಯೂ ಇದ್ದಂತೆ ಕಂಡುಬರುತ್ತದೆ. ಕೊತ್ತಿ ಹೊಡೆದ ಪಾಪ ಮುತ್ತತ್ತಿ ಹೊಕ್ಕರೂ ಬಿಡದು ಎಂಬ ಗಾದೆ ಇದಕ್ಕೆ ಪುಷ್ಟಿ ಕೊಡುತ್ತದೆ.

ಕತ್ತೆ ಕೂಗಿದರೆ ಶುಭವೆಂತಲೂ ಗೂಬೆ ಕೂಗಿದರೆ ಅಪಶಕುನವೆಂತಲೂ ಕೋಳಿ ರೆಕ್ಕೆ ಕಾಯಿಸಿದರೆ ಮಳೆ ಬರುತ್ತದೆ ಎಂತಲೂ ನಂಬಿಕೆ.

	ದುಷ್ಟರಿಂದ ರಕ್ಷಿಸಿ ದೊಡ್ಡವನಾಗುವತನಕ ಮಗುವನ್ನು ಹಾವು, ಹುಲಿ, ಆನೆ ಹೀಗೆ ಅನೇಕ ಪ್ರಾಣಿಗಳು ಕ್ರಮವಾಗಿ ಸಾಕಿದ ಉದಾಹರಣೆಗಳು ಕನ್ನಡ ಜನಪದ ಕಥೆಗಳಲ್ಲಿ ಸಿಗುತ್ತವೆ. ಕಡಜ ಮನೆಯೊಳಗೆ ಗೂಡು ಕಟ್ಟಿದರೆ ಆ ಮನೆಯ ಹೆಂಗಸರಲ್ಲಿ ಯಾರಾದರೊಬ್ಬರು ಗರ್ಭಿಣಿ ಆಗುತ್ತಾರೆ. ಲೈಂಗಿಕ ರೋಗ ಇರುವವರು ಕತ್ತೆಯನ್ನು ಸಂಭೋಗಿಸಿದರೆ ಗುಣವಾಗುತ್ತದೆ ಎಂಬಂಥ ನಂಬಿಕೆಯೂ ಕೆಲವು ಕಡೆ ಪ್ರಚಲಿತವಿದೆ. ಜೇಡ ಮೈಮೇಲೆ ಓಡಾಡಿದರೆ ಹೊಸಬಟ್ಟೆಯ ಯೋಗವಿದೆ ಎನ್ನುತ್ತಾರೆ.

ಹಲ್ಲಿ ವಿಷವುಳ್ಳ ಒಂದು ಪ್ರಾಣಿ ಎಂಬುದು ಸರ್ವವಿದಿತ ವಿಷಯ. ಆದರೆ ಅದು ಮೈಮೇಲೆ ಯಾವ ಭಾಗದಲ್ಲಿ ಬಿದ್ದಿತು. ಯಾವ ದಿಕ್ಕಿನಿಂದ ಯಾವ ದಿಕ್ಕಿಗೆ ಚಲಿಸಿತು, ಮುಂತಾದ ವಿಷಯಗಳನ್ನು ಆಧರಿಸಿ ಭವಿಷ್ಯದ ಆಗುಹೋಗುಗಳನ್ನು ನಿರ್ಧರಿಸುವ, ಹಲ್ಲಿ ಶಕುನ ಅಥವಾ ಹಲ್ಲಿಶಾಸ್ತ್ರ ಪ್ರಚಲಿತ ಕಾಲದಲ್ಲೂ ಪರಿಣಾಮಕಾರಿ ಬಳಕೆಯಲ್ಲಿದೆ.

ಹಲ್ಲಿಯಷ್ಟೆ ಅಥವಾ ಹಲ್ಲಿಗಿಂತಲೂ ಅಪಾಯಕಾರಿ ವಿಷವುಳ್ಳ ಪ್ರಾಣಿಯಾದ ಹಾವಿನ ಬಗ್ಗೆಯೂ ಅಷ್ಟೇ ಗಂಭೀರವಾದ ಅನೇಕ ನಂಬಿಕೆಗಳಿವೆ. ನಾಗರದೋಷ ಇರುವ ಹೆಂಗಸರು ಬಂಜೆಯಾಗುತ್ತಾರೆ ಅಥವಾ ಅವರಲ್ಲಿ ಹುಟ್ಟಿದ ಮಕ್ಕಳು ಆಕಾಲ ಮರಣಕ್ಕೆ ತುತ್ತಾಗುತ್ತಾರೆ. ಪರಿಹಾರಾರ್ಥವಾಗಿ ಅರಳಿ ಮತ್ತು ಬೇವಿನ ಮರಗಳು ಜೋಡಿಯಾಗಿರುವ ಜಗಲಿಟ್ಟೆಯ ಮೇಲೆ ನಾಗರಕಲ್ಲನ್ನು ಪ್ರತಿಷ್ಠಾಪಿಸುತ್ತಾರೆ. ಅರಳಿ ಮತ್ತು ಬೇವು ಗಂಡಹೆಂಡಿರಂತೆ. ಜಗಲಿಕಟ್ಟೆಯ ಮೇಲಿರುವ ಅರಳಿ ಮರದ ಜೊತೆಗೆ ಒಂದು ಬೇವಿನ ಮರವೂ ಇರುತ್ತದೆ. ಅವೆರಡನ್ನೂ ಒಟ್ಟಿಗೆ ನೆಟ್ಟು ವಿಧಿವತ್ತಾಗಿ ಮದುವೆಯ ಶಾಸ್ತ್ರ ನೆರವೇರಿಸುವುದುಂಟು. ತನ್ನಲ್ಲಿ ಇರುವ ದೋಷ ನಾಗರದೋಷ ಎಂದು ಕಂಡು ಬಂದಾಗ ಅಂಥ ದೋಷವನ್ನು ಇತರರಿಗೆ ದಾನ ಮಾಡಿ ಶುದ್ಧಳಾಗುವುದು ನಾಗರಕಲ್ಲಿನ ಪ್ರತಿಷ್ಠಾಪನೆಯ ಉದ್ದೇಶ. ತಾಯಿಯಾಗಲೇಬೆಂಕೆಂಬ ಹೆಣ್ಣುಮಗಳ ಹಂಬಲದ ಪರಾಕಾಷ್ಠೆಯನ್ನು ಈ ನಂಬಿಕೆಯ ಹಿನ್ನೆಲೆಯಲ್ಲಿ ಕಾಣಬಹುದು. ವಿದುರಾಶ್ವತ್ಥದಲ್ಲಿರುವ ಅಶ್ವತ್ಥನಾರಾಯಣ ದೇವಾಲಯದ ಮುಂದಿರುವ ಸಾವಿರಾರು ನಾಗಶಿಲೆಗಳನ್ನು ನೋಡಿದಾಗ ಈ ಬಗೆಗಿರುವ ಜನರ ನಂಬಿಕೆಯ ತೀವ್ರತೆ ವ್ಯಕ್ತವಾಗುತ್ತದೆ. ಯಾವ ಹುತ್ತದಲ್ಲಿ ಎಂಥ ಹಾವಿದೆಯೋ ಎಂಬ ನುಡಿಗಟ್ಟಿದೆ. ನಾಗರಪಂಚಮಿಯಂದು ಹಾಗೂ ಇತರ ಹಬ್ಬಗಳಲ್ಲಿ ಹಾವು ಕುಡಿಯಲೆಂದು ಹಾವಿಗೆ ತೃಪ್ತಿಯಾಗಲೆಂದು ಹುತ್ತಕ್ಕೆ ಹಾಲು ಎರೆಯುವುದುಂಟು. ಹಾವು ಪೊರೆ ಬಿಡುವುದರಿಂದ ಅದರ ಮೈ ಆಗಾಗ ಹೊಸದಾಗುತ್ತದೆ; ಮತ್ತೆ ಮತ್ತೆ ಯೌವನ ಪಡೆದಂತಾಗುವುದರಿಂದ ಅದು ಚಿರಂಜೀವಿ ಎಂದು ಭಾವಿಸಿಕೊಂಡವರೂ ಉಂಟು. ಅದು ಅಪಾಯಕಾರಿ ಪ್ರಾಣಿಯಾದುದರಿಂದಲೋ ಏನೋ ಮಾನವ ಅದರ ಪ್ರೀತಿಯನ್ನು ಸಂಪಾದಿಸುವ ಸಲುವಾಗಿ ಅದಕ್ಕೆ ಸಾವಿರ ಹೆಡೆಗಳನ್ನು ಸೃಷ್ಟಿಸಿದ, ಭೂಮಿಯನ್ನೆ ಅದರ ಮೇಲೆ ಹೊರಿಸಿದ, ನಿಧಿ ಕಾಯುವ ಭಾರವನ್ನೂ ವಹಿಸಿಕೊಟ್ಟ. ಸಾವಿನ ದೂತನಾಗಿ ಅಥವಾ ಪತ್ರವಿನಿಮಯದ ಮಾಧ್ಯಮವಾಗಿ ಪಾರಿವಾಳದ ಬಳಕೆ ಬಹಳ ಹಳೆಯ ಪದ್ದತಿ. ಢಾಕ್ಕಾದ ಒಬ್ಬ ಮುಸ್ಲಿಮ್ ದೊರೆ ಯುದ್ಧಕ್ಕೆ ಹೋಗುವಾಗ ತನ್ನ ರಾಣೀವಾಸದವರಿಗೆ ಒಂದು ಸೂಚನೆ ಕೊಟ್ಟ. ತಾನೇನಾದರೂ ಸೋತರೆ ತನ್ನಲ್ಲಿರುವ ಪಾರಿವಾಳವನ್ನು ಬಿಟ್ಟು ಬಿಡುವುದಾಗಿಯೂ ಅದು ಕಂಡೊಡನೆ ಇಡೀ ನಗರವನ್ನು ಸುಟ್ಟುಬಿಡಬೇಕೆಂದೂ ಪತ್ನಿಯರೆಲ್ಲ ಸಹಗಮನ ಆಚರಿಸಬೇಕೆಂದೂ ಹೇಳಿ ಯುದ್ಧಕ್ಕೆ ಹೊರಟ. ಯುದ್ಧದಲ್ಲಿಯೇನೋ ಗೆದ್ದ. ವಿಜಯೋತ್ಸವದ ಉತ್ಸಾಹದಲ್ಲಿ ಹಿಂತಿರುಗುತ್ತಿರುವಾಗ ಪಾರಿವಾಳ ಅಕಸ್ಮಾತ್ ತಪ್ಪಿಸಿಕೊಂಡಿತು. ಆ ದೊರೆ ಬಂದಾಗ ತನ್ನ ರಾಣೀಸಮೂಹವೂ ಪಟ್ಟಣವೂ ಸುಟ್ಟು ಬೂದಿಯಾಗಿರುವುದನ್ನು ಕಂಡ.

	ನೀಲಗಿರಿಯ ತೋಡರಿಗೆ ಎಮ್ಮೆ ಪೂಜ್ಯಪ್ರಾಣಿ. ಕರ್ನಾಟಕದಲ್ಲಿ ಎಮ್ಮೆಯ ಹೆಸರುಳ್ಳ ಅನೇಕ ಊರುಗಳಿವೆ. ಒಂದಾನೊಂದು ಕಾಲದಲ್ಲಿ ಅಲ್ಲೆಲ್ಲ ತೋಡರು ಇದ್ದರೋ, ಎಮ್ಮೆಯ ಬಗ್ಗೆ ಕನ್ನಡಿಗರಿಗೆ ಸಹಜ ಗೌರವವಿತ್ತೋ ತಿಳಿಯದು. ರೈತನಿಗೆ ಎಮ್ಮೆಯೂ ಬಹು ಉಪಯುಕ್ತ ಪ್ರಾಣಿ. ಅದರಿಂದ ಯಥೇಚ್ಛವಾಗಿ ಹಾಲು ಸಿಗುತ್ತದೆ; ಗೊಬ್ಬರ ದೊರೆಯುತ್ತದೆ; ಉಳಲಿಕ್ಕೂ ಅದು ಬರುತ್ತದೆ. ಅದು ಯಮನ ವಾಹನವಾದ್ದರಿಂದಲೋ ಅಥವಾ ರಾಕ್ಷಸಾಕಾರ ಪಡೆದು ದುರ್ಗೆಯಿಂದ ಸಂಹಾರಗೊಂಡಿದ್ದರಿಂದಲೋ ಅದು ಗೋವಿನ ಗೌರವವನ್ನು ಸಂಪಾದಿಸಲಿಲ್ಲ.

	ಕೋತಿಯಂತೂ ಸಾಕ್ಷಾತ್ ಹನುಮಂತನ ಅವತಾರ. ಹನುಮಂತ ಸ್ವಾಮಿನಿಷ್ಠೆಗೆ ಸಂಕೇತ, ವಾಯುದೇವನ ಮಗ, ಶಕ್ತಿಯಲ್ಲಿ ಪರ್ವತೋಪಮ. ಆದ್ದರಿಂದ ಸಹಜವಾಗಿಯೇ ಕೋತಿಯ ಬಗ್ಗೆ ಗೌರವ. ಭಕ್ತಿ.

	ಸೇತುಬಂಧನ ಸಮಯದಲ್ಲಿ ಆಯಾಚಿತವಾಗಿ ನೆರವಾದ ಅಳಿಲನ್ನು ಶ್ರೀರಾಮ ಆಶೀರ್ವದಿಸಿದನಂತೆ. ಅಳಿಲಿನ ಬೆನ್ನಮೇಲೆ ಇರುವ ಬಿಳಿ ಗೆರೆಗಳು ಶ್ರೀರಾಮನ ಬೆರಳಿನ ಗುರುತುಗಳಂತೆ.

	ಯಾವುದೇ ದೇಶದ ನಿಜವಾದ ಬದುಕನ್ನೂ ಸಂಸ್ಕøತಿಯನ್ನೂ ತಿಳಿಯಬೇಕಾದರೆ ಆ ದೇಶದ ಜಾನಪದಕ್ಕೆ ಶರಣುಹೋಗಬೇಕು ಎಂಬುದು ಪಾಶ್ಚಾತ್ಯ ವಿದ್ವಾಂಸರೊಬ್ಬರ ಅಭಿಪ್ರಾಯ. ಆನೆಯಿಂದ ಹಿಡಿದು ಕ್ರಿಮಿಕೀಟಗಳವರೆಗೂ ನಂಬಿಕೆಗಳಲ್ಲಿ ಸ್ಥಾನ ಗಳಿಸಿಕೊಂಡಿರುವುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು. ಮಾನವನ ಬದುಕಿಗೆ ಅದು ಪರವಾಗಿರಲಿ ವಿರೋಧವಾಗಿರಲಿ, ಹೊಂದಲಿ ಹೊಂದದಿರಲಿ, ಪ್ರಯೋಜನವಿರಲಿ ಇಲ್ಲದಿರಲಿ, ಸಟೆಯಾಗಿರಲಿ, ದಿಟವಾಗಿರಲಿ ಒಂದು ನಂಬಿಕೆ ಹುಟ್ಟಿಕೊಳ್ಳಬೇಕಾದರೆ ಯಾವುದೋ ಒಂದು ಘಟನೆ ಕಾರಣವಾಗಿರಲೇ ಬೇಕು. ನಂಬಿಕೆಯನ್ನೇ ಆಧಾರವಾಗಿಟ್ಟುಕೊಂಡು ಎಂಥ ಘಟನೆ ನಡೆದಿದ್ದೀತೆಂದು ಊಹಿಸಬಹುದು, ವಿಶ್ಲೇಷಿಸಬಹುದು. ಆಗ ಆ ನಂಬಿಕೆ ಹುಟ್ಟಿಕೊಂಡ ಪರಿಸರ, ಆ ಪರಿಸರಕ್ಕೆ ಕಾರಣವಾಗುವ ಸಾಂದರ್ಭಿಕ ಮನೋಭಾವ, ಆ ಮನೋಭಾವವನ್ನು ನಿಯಂತ್ರಿಸುವ ಬದುಕು-ಇವು ಸ್ವಲ್ಪಮಟ್ಟಿಗಾದರೂ ಗೋಚರಿಸಬಹುದು. ಎಷ್ಟೋ ನಂಬಿಕೆಗಳು ವೈಜ್ಞಾನಿಕವಾಗಿಯೂ ಯಶಸ್ವಿಯಾಗಬಹುದು; ಆಗದೆಯೂ ಹೋಗಬಹುದು. ಒಟ್ಟಿನಲ್ಲಿ ಪ್ರಾಚೀನ ಮಾನವನ ಬದುಕನ್ನು ಅರ್ಥೈಸಲು ಇರುವ ಅನೇಕ ಮಾರ್ಗಗಳಲ್ಲಿ ಪ್ರಾಣಿಗಳನ್ನು ಕುರಿತ ನಂಬಿಕೆಗಳೂ ಒಂದು ಮಾರ್ಗವಾಗುತ್ತದೆ.

	ವೈಜ್ಞಾನಿಕ ವಿಶ್ಲೇಷಣೆಗಳಿಂದ ಅದೆಷ್ಟೋ ನಂಬಿಕೆಗಳು ತಮ್ಮತನವನ್ನು ಕಳೆದುಕೊಂಡರೂ ಯಶಸ್ವಿಯಾಗಿ ಉಳಿಯಬಲ್ಲ ಬೆಳೆಯಬಲ್ಲ ನಂಬಿಕೆಗಳೂ ಅಷ್ಟೇ ಸಂಖ್ಯೆಯಲ್ಲಿವೆ. ನಾಗರೀಕತೆಯ ಇತಿಹಾಸವನ್ನು ಗುರುತಿಸುವ ಹಾದಿಯಲ್ಲಿ ಈ ನಂಬಿಕೆಗಳಿಂದ ಅಪಾರ ಪ್ರಯೋಜನವಿದೆ.	
(ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ